ಕಸ್ಸಪ

(907-917). ಲಂಕಾ ಅಥವಾ ಈಗಿನ ಸಿಂಹಳ ದೇಶದ ಇತಿಹಾಸದಲ್ಲಿ ಪ್ರಸಿದ್ದ ರಾಜ. 5ನೆಯ ಕಸ್ಸಪ ಅಭಯಶಿಲಾಮೇಘವರ್ಣ. ಆ ದೇಶದ ಪುರಾತನ ಗ್ರಂಥವಾದ ಮಹಾವಂಶದಲ್ಲಿ ಇವನ ಬಗ್ಗೆ ಕೆಲವು ವಿವರಗಳು ದೊರೆಯುತ್ತವೆ. ಈತ ಧರ್ಮಿಷ್ಠನೂ ನ್ಯಾಯಪರನೂ ಆಗಿ ರಾಜ್ಯಭಾರ ಮಾಡುತ್ತಿದ್ದನೆಂದು ಮಹಾವಂಶ ತಿಳಿಸುತ್ತದೆ. ಭಾರತದ ಇತಿಹಾಸದಲ್ಲೂ ಕಸ್ಸಪನ ಹೆಸರು ಬರುತ್ತದೆ. 10ನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಚೋಳರು ಪ್ರಬಲರಾಗಿ ತಮ್ಮ ನೆರೆಯವರಾದ ಪಾಂಡ್ಯರ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದ್ದರು. 910 ರಲ್ಲಿ ಚೋಳ 1 ನೆಯ ಪರಾಂತಕ ಪಾಂಡ್ಯರ ರಾಜಧಾನಿ ಮಧುರೆಯನ್ನು ಗೆದ್ದು, ಮಧುರೈಕೊಂಡ ಎಂಬ ಬಿರುದನ್ನು ಪಡೆದ. ಆ ಸಂದರ್ಭದಲ್ಲಿ ಪಾಂಡ್ಯರಾಜ 2 ನೆಯ ಮಾರವರ್ಮನ್ ರಾಜಸಿಂಹ ಇವನ ಸಹಾಯವನ್ನು ಬೇಡಿದಾಗ ಕಸ್ಸಪ, ತನ್ನ ಮಂತ್ರಿ ಹಾಗೂ ಅಧಿಕಾರಿಗಳ ಸಲಹೆಯಂತೆ ಮಾರವರ್ಮನ್ ರಾಜಸಿಂಹನ ಸಹಾಯಕ್ಕೆ ಸೈನ್ಯವನ್ನು ಕಳುಹಿಸಿಕೊಟ್ಟ. ಕಸ್ಸಪನ ಸೇನೆಗೂ ಚೋಳರ ಸೇನೆಗೂ ವೆಳ್ಳೂರಿನಲ್ಲಿ ಭೀಕರ ಹೋರಾಟ ನಡೆದು ಚೋಳರ ಕೈ ಮೇಲಾಯಿತು. ಈ ಸಂದರ್ಭದಲ್ಲಿ ದಂಡಿನಲ್ಲಿ ಪ್ಲೇಗು ರೋಗ ತಲೆದೋರಿದುದರಿಂದ ಕಸ್ಸಪ ತನ್ನ ಸೈನ್ಯವನ್ನು ಹಿಂತಿರುಗಿಸಿಕೊಂಡನೆಂದು ಮಹಾವಂಶ ತಿಳಿಸುತ್ತದೆ.

 ಈ ವಂಶಕ್ಕೆ ಸೇರಿದ ಮತ್ತೊಬ್ಬ ಕಸ್ಸಪ ದೊರೆ 11 ನೆಯ ಶತಮಾನದಲ್ಲಿ ದಕ್ಷಿಣ ಭಾರತದ ಚೋಳರೊಡನೆ ಯುದ್ಧ ನಡೆಸಿ ಸೋತನೆಂದು ಇತಿಹಾಸ ತಿಳಿಸುತ್ತದೆ. ಚೋಳರಿಂದ ಪರಾಜಿತನಾದ ಕಸ್ಸಪ ಸಿಂಹಳದ ಉತ್ತರಭಾಗವನ್ನು ಚೋಳರಿಗೆ ಬಿಟ್ಟುಕೊಟ್ಟು ದಕ್ಷಿಣದಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿದ.         

 (ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ